User:Prashanth Ignatius/C Innasappa

ಸಿ ಇನ್ನಾಸಪ್ಪ article

ಹಾರೋಬೆಲೆಯೆಂಬ ಸಣ್ಣ ಗ್ರಾಮವೊಂದು ಇಂದು ಕ್ರೈಸ್ತ ವಲಯದಲ್ಲಿ ತನ್ನದೇ ಆದ ಅನೇಕ ವೈಶಿಷ್ಟ್ಯಪೂರ್ಣವಾದ ಸಾಧನೆಗಳಿಂದ ಕಂಗೊಳಿಸುತ್ತಿದೆ.ಹಲವಾರು ಧರ್ಮಗುರುಗಳನ್ನು ಕನ್ಯಾಸ್ತ್ರೀಯರನ್ನು, ವಿದ್ಯಾವಂತರನ್ನು, ಸಾಧಕರನ್ನು ಕ್ರೈಸ್ತ ವಯಕ್ಕೆ ಮಾತ್ರವಲ್ಲದೆ ಸಮಾಜಕ್ಕೂ ನೀಡಿದೆ.ಹಾರೋಬೆಲೆ ಈ ರೀತಿಯಾಗಿ ತನ್ನದೇ ಆದ ಭವ್ಯ ಇತಿಹಾಸವನ್ನು ರೂಪಿಸಿಕೊಳ್ಳುವಲ್ಲಿ ಹಾಗು ತನ್ನದೇ ಆದ ವಿಶಿಷ್ಠತೆಯನ್ನು ಬೆಳೆಸಿಕೊಳ್ಳುವಲ್ಲಿ ಹಲವಾರು ಮಹನೀಯರ ಪಾತ್ರವಿದೆ. ಅಂತಹ ಮಹನೀಯರ ಸಾಲಿನಲ್ಲಿ ನೆನಪಿಸಿಕೊಳ್ಳಲೇಬೇಕಾದ ಅನರ್ಘ್ಯ ರತ್ನ ಸಿ.ಇನ್ನಾಸಪ್ಪ ದೊಡ್ಡಮೇಷ್ಟ್ರುರವರು. ಹಾರೋಬೆಲೆ ಗ್ರಾಮದಲ್ಲಿ ವ೦.ಸ್ವಾಮಿ. ಲಾಜರಸ್ ರವರು ಪ್ರಾರ೦ಭಿಸಿದ ಯೇಸು ಕ್ರಿಸ್ತರ ಪೂಜ್ಯ ಪಾಡುಗಳ ಮಹಿಮೆಯನ್ನು ಸ೦ಪೂರ್ಣವಾಗಿ ಪರಿಷ್ಕರಿಸಿ ಸುಮಾರು 80 ವರ್ಷಗಳ ಕಾಲ ಅದನ್ನು ನಿರ್ದೇಶಕರಾಗಿ ಮುನ್ನಡೆಸಿಕೊ೦ಡು ಬ೦ದಿದ್ದು, ಸುಮಾರು 35 ಕ್ಕೂ ಹೆಚ್ಚು ಬೈಬಲ್ ಆಧಾರಿತ ನಾಟಕಗಳ ರಚನೆ, 800ಕ್ಕೂ ಹೆಚ್ಚು ಭಜನಾ ಹಾಗೂ ರ೦ಗ ಗೀತೆಗಳ ರಚನೆ, 30 ವರ್ಷಗಳ ಕಾಲ ಶಾಲೆಯ ಶಿಕ್ಷಕ, ಮುಖ್ಯ ಉಪಾಧ್ಯಾರಾಗಿ ಸೇವೆ ಹಾಗೂ ಪ೦ಚಾಯಿತಿ ಅಧ್ಯಕ್ಷತೆಯನ್ನು ಒಳಗೊ೦ಡ೦ತೆ ಅನೇಕ ಜವಬ್ದಾರಿಗಳ ನಿರ್ವಹಣೆ ಹಾಗೂ ಕರ್ನಾಟಕದ ರಾಯಭಾರಿಯಾಗಿ ರೋಮ್ ದೇಶದಲ್ಲಿ ಪೋಪ್ ಜಗದ್ಗುರುಗಳ ಭೇಟಿ,ಇವು ಇವರ ಜೀವಮಾನದ ಕೆಲವು ಪ್ರಮುಖ ಸಾಧನೆಗಳಾಗಿವೆ. ಜನನ ಹಾಗೂ ಬಾಲ್ಯ[edit]

ಸಿ ಇನ್ನಾಸಪ್ಪನವರು ಹುಟ್ಟಿದ್ದು 1901ರ ಜುಲೈ 10ರಂದು. ತಾಯಿ ರಾಜಮ್ಮ ಹಾಗು ತಂದೆ ಚಿನ್ನಪ್ಪರ 4ನೇ ಮಗನಾಗಿ ಹುಟ್ಟಿದ ಇನ್ನಾಸಪ್ಪನವರಿಗೆ ಒಬ್ಬ ಅಕ್ಕ ಇಬ್ಬರು ಅಣ್ಣಂದಿರು ಹಾಗು ಒಬ್ಬ ತಂಗಿ. ಇನ್ನಾಸಪ್ಪನವರ ವಿಧ್ಯಾಭ್ಯಾಸ ಹಾಗು ಸಾಂಸ್ಕೃತಿಕ ಬದುಕು ಹೇಗೆ ಅರಳಿತು ಎಂಬುದರ ಬಗ್ಗೆ ಹೆಚ್ಚಿನ ಮಾಹಿತಿಗಳಿಲ್ಲದಿದ್ದರೂ ಆ ಕಾಲದಲ್ಲೇ ಬೆ೦ಗಳೂರಿನಲ್ಲಿ 7ನೇ ತರಗತಿಯವರೆಗೂ ಓದಿದ್ದರು ಎ೦ಬ ಅಸ್ಪಷ್ಟ ಮಾಹಿತಿ ಇದೆ. ಆದರೆ 5 ವರ್ಷದ ಪ್ರಾಯದಲ್ಲಿ ತಮ್ಮ ತಾಯಿಯ ತೊಡೆಯ ಮೇಲೆ ಕುಳಿತು ಮಹಿಮೆಯನ್ನು ನೋಡಿದ ನೆನಪನ್ನು ಮಾತ್ರ ಇನ್ನಾಸಪ್ಪನವರು ಮೆಲುಕು ಹಾಕುತ್ತಿದ್ದುದ್ದು ಅವರನ್ನು ಹತ್ತಿರದಿಂದ ಬಲ್ಲ ಅನೇಕರಿಗೆ ನೆನೆಪಿದೆ. ಅವರ ಬಾಲ್ಯ ಜೀವನದ ಮೊದಲ ನೆನಪು ಅವರಿಗೆ ಅತಿ ಪ್ರಿಯವಾಗಿದ್ದ ಮಹಿಮೆಗೆ ಸಂಬಂಧಿಸಿದ್ದು ಎಂಬುದು ನಿಜಕ್ಕೂ ಕಾಕತಾಳಿಯ. ಆ ವೇಳೆಗೆ ಹಾರೋಬೆಲೆಯಲ್ಲಿ ಧರ್ಮಗುರುಗಳಾಗಿದ್ದ ವಂ. ಸ್ವಾಮಿ. ಲಾಜರಸ್ ರವರು ಇವರ ಮೇಲೆ ಗಾಢವಾದ ಪ್ರಭಾವವನ್ನು ಬೀರಿದ್ದರು.ಇಂತಹ ಕುಗ್ರಾಮದಲ್ಲಿ ತಮ್ಮ ಇತಿಮಿತಿಗಳ ನಡುವೆಯೇ ಮಹಿಮೆಯಂಥ ಕಾರ್ಯಗಳನ್ನು ಆರಂಭಿಸಿದ್ದ ವಂ.ಸ್ವಾಮಿ.ಲಾಜರಸ್ ರವರ ಜೀವನ ನಿಜಕ್ಕೂ ಆದರ್ಶನೀಯ.ಈ ಪ್ರಾ೦ತ್ಯಗಳಲ್ಲಿ ಕ್ರೈಸ್ತ ಧರ್ಮವು ಹೆಮ್ಮರವಾಗಿ ಬೆಳೆದಿರುವುದಕ್ಕೆ ವ೦.ಸ್ವಾಮಿ ಲಾಜರಸ್‌ರ೦ಥ ಮಹನೀಯರ ನಿಸ್ವಾರ್ಥ ಸೇವೆಯನ್ನು ಕೃತಜ್ಞತೆಯಿಂದ ನೆನೆಯಬೇಕಾಗಿದೆ.ಚಿಕ್ಕ ವಯಸ್ಸಿನಿ೦ದಲೇ ದೇವಾಲಯದ ಕಾರ್ಯಗಳಲ್ಲಿ ತಮ್ಮನ್ನೇ ತೊಡಗಿಸಿಕೊಂಡು ಬಂದ ಇನ್ನಾಸಪ್ಪನವರು ತಕ್ಕ ಮಟ್ಟಿನ ವಿದ್ಯಾಭ್ಯಾಸವನ್ನೂ ಮುಗಿಸಿಕೊಂಡರು. ಓದು, ಬರಹ, ನಾಟಕ, ಸಂಗೀತದತ್ತ ಒಲವು ಬೆಳೆಸಿಕೊಂಡಿದ್ದ ಅವರು ಮಹಿಮೆ ನಾಟಕದಲ್ಲಿ ರಾಯಪ್ಪರ ಪಾತ್ರವನ್ನು ಮಾಡುತ್ತಾ, ಮು೦ದೆ ಆ ಪಾತ್ರದಿಂದ ಬಿಡುಗಡೆ ಹೊಂದಿ ಮಹಿಮೆ ಮಂಡಳಿಗೆ ಕಾರ್ಯದರ್ಶಿಗಳಾಗಿ ಆಯ್ಕೆಗೊಂಡಿದ್ದರು. ಮಹಿಮೆ ಪುಸ್ತಕಗಳನ್ನ ಬರೆದಿಟ್ಟು ಪಾತ್ರಧಾರಿಗಳಿಗೆ ಅಭ್ಯಾಸ ನೀಡುವ ಹೊಣೆಯನ್ನು ಸಹಾ ಅವರಿಗೆ ನೀಡಲಾಗಿತ್ತು. ಉದ್ಯೋಗ[edit]

ಈ ಸಮಯದಲ್ಲಿ ಅವರ ಜೀವನದಲ್ಲಿ ಸಿಡಿಲೆರಗಿದಂತೆ ಬಂದದ್ದು ತಂದೆಯ ಸಾವು. ಬಡತನ, ಸಾಲ, ದೊಡ್ಡ ಸಂಸಾರದ ಜವಾಬ್ದಾರಿಯಿಂದಾಗಿ ಉದ್ಯೋಗವನ್ನು ಅರಸಿಕೊಂಡು ಬೆಂಗಳೂರಿಗೆ ಬರಬೇಕಾಯಿತು. ಬೆಂಗಳೂರಿನ ಸಂತ ಮಾರ್ಥಾಸ್ ಆಸ್ಪತ್ರೆಯಲ್ಲಿ ಕೆಲಸಕ್ಕೆ ಸೇರಿದ ಇನಾಸಪ್ಪನವರ ಜೀವನ ಆಗ ತನ್ನದೇ ಆದ ತಿರುವನ್ನು ಪಡೆಯಿತು. ಇತ್ತ ಧರ್ಮಕೇಂದ್ರದ ಗುರುಗಳಾಗಿದ್ದ ಸ್ವಾಮಿ. ಲಾಜರಸ್ರವರಿಗೆ ತಮ್ಮ ಎಲ್ಲಾ ಕಾರ್ಯಗಳಲ್ಲೂ ಸಕ್ರಿಯವಾಗಿ ಪಾಲ್ಗೊಂಡು ಸಹಾಯ ಮಾಡುತ್ತಿದ್ದ ಇನ್ನಾಸಪ್ಪನವರು ದೂರದ ಬೆಂಗಳೂರಿನಲ್ಲಿರುವುದು ಇಷ್ಟವಿಲ್ಲದಿದ್ದರೂ ಸಂಸಾರದ ಹೊಣೆ ಮೇರೆಗೆ ಅವರು ಉದ್ಯೋಗ ಮಾಡಲೇಬೇಕಾದ್ದರಿಂದ ವಿಧಿಯಿಲ್ಲದೆ ಸುಮ್ಮನಿರಬೇಕಾಯಿತು.ದೈವ ಚಿತ್ತವೇ ಬೇರೆಯಾಗಿತ್ತೇನೋ, ಕೆಲಸಕ್ಕೆ ಸೇರಿದ ಕೆಲವೇ ತಿಂಗಳುಗಳ ಬಳಿಕ, ಒಂದು ರಾತ್ರಿ ಮಲಗಿರುವಾಗ ಧ್ವನಿಯೊಂದು ಕೇಳಿದಂತಾಗಿ ಅದು ತನ್ನನ್ನು ಹಾರೋಬೆಲೆಗೆ ಹಿಂತಿರುಗಿ ಹೋಗಬೇಕೆಂದು ಹೇಳುವಂತಾಯಿತು ಎಂದು ಶ್ರೀ. ಇನಾಸಪ್ಪನವರೇ ಎಷ್ಟೋ ಬಾರಿ ತಮ್ಮ ಆಪ್ತರ ಬಳಿ ಹೇಳಿಕೊಂಡಿದ್ದಾರೆ.ಅದು ದೇವ ಮಾತೆಯ ಪ್ರೇರಣೆಯೇ ಎಂದು ಅವರು ಕೊನೆಯವರೆಗೂ ನಂಬಿದ್ದರು. ಆದರೂ ಇದು ದೈವ ಪ್ರೇರಣೆಯೋ ಕನಸೋ ಎಂದು ಯೋಚಿಸುತ್ತಲೇ, ಉದ್ಯೋಗವನ್ನು ಮುಂದುವರಿಸಬೇಕೇ ಅಥವಾ ಊರಿಗೆ ಹಿಂತಿರುಗಿ ಹೋಗಬೇಕೇ ಎನ್ನುವ ಧರ್ಮಸಂಕಟದಲ್ಲೇ ಇಡೀ ರಾತ್ರಿಯನ್ನು ಕಳೆದ ಇನಾಸಪ್ಪನವರಿಗೆ ಮುಂಜಾನೆಯೇ ಆಶ್ಚರ್ಯವೊಂದು ಕಾದಿತ್ತು. ಲಾಜರಸ್ ಸ್ವಾಮಿಯ ಸೂಚನೆಯಂತೆ ಬೆಂಗಳೂರಿಗೆ ಬಂದಿದ್ದ ಊರಿನ ಕೆಲವು ಹಿರಿಯರು, ಅವರಿದ್ದ ಸ್ಥಳಕ್ಕೆ ಬಂದು ಹಾರೋಬೆಲೆಗೆ ಅವರನ್ನು ಕರೆದುಕೊಂಡು ಹೋಗಲು ನಿಶ್ಚಯಿಸಿದರು. ಗುರುಗಳ ಸೂಚನೆ ಹಾಗೂ ಊರಿನ ಹಿರಿಯರ ಪ್ರೀತಿಗೆ ಮಣಿಯಲೇಬೇಕಾದ ಶ್ರೀ. ಸಿ. ಇನಾಸಪ್ಪನವರು ಮತ್ತೆ ಹಾರೋಬೆಲೆಗೆ ಮರಳುವುದರೊಂದಿಗೆ ಅವರ ಜೀವನದ ಮಹತ್ವದ ಅಧ್ಯಾಯವೊಂದು ಆರಂಭವಾಗುತ್ತದೆ. ಊರಿಗೆ ಬಂದ ನಂತರ ಊರಿನಲ್ಲೇ ಉಳಿಯಬೇಕೆಂದು ಗ್ರಾಮಸ್ಥರು ಒತ್ತಾಯಿಸಿ, ಸಂಸಾರ ನಿರ್ವಹಣೆಗೆ ಬೇಕಾದ ಧವಸ ಧಾನ್ಯಗಳನ್ನು ಊರಿನವರೇ ಸಂಗ್ರಹಿಸಿ ಕೊಡುತ್ತಾರೆ.ಈ ಹೃದಯಸ್ಪರ್ಶಿ ಘಟನೆಯೊ೦ದಿಗೆ ಗ್ರಾಮಸ್ಥರನ್ನು ತುಂಬು ಹೃದಯದಿಂದ ನೆನೆಯುತ್ತಿದ್ದ ಇನಾಸಪ್ಪನವರು ಆ ಧನ್ಯತಾಭಾವವನ್ನು, ಊರಿನ ಮೇಲಿನ ಅಭಿಮಾನವನ್ನು ತಮ್ಮ ಕೊನೆಯ ಉಸುರಿನವರೆಗೂ ಉಳಿಸಿ, ಬೆಳೆಸಿಕೊಂಡು ಬಂದರು. ಈ ಎಲ್ಲಾ ಘಟನಾವಳಿಗಳ ಹಿಂದೆ ವಂ.ಸ್ವಾಮಿ.ಲಾಜರಸ್‌ರವರ ಪಾತ್ರ ಮಹತ್ವವಾದುದು. ಶ್ರೀ. ಸಿ ಇನ್ನಾಸಪ್ಪನವರ ಬಾಳಿನ ಬಹುದೊಡ್ಡ ಸ್ಪೂರ್ತಿಯೂ ಅವರೇ. ಮಹಿಮೆ ನಾಟಕದ ಹುರಿಯಾಳು[edit]

ಮುಂದೆ 1925ರಲ್ಲಿ ವಂ.ಸ್ವಾಮಿ.ಲಾಜರಸ್‌ರವರು ನಿಧನರಾಗುತ್ತಾರೆ. ಆ ಕಿರಿಯ ವಯಸ್ಸಿನಲ್ಲೇ ಮಹಿಮೆಯ ಸಂಪೂರ್ಣ ಜವಾಬ್ದಾರಿ ಇವರ ಹೆಗಲಿಗೇರುತ್ತದೆ.ಮಹಿಮೆ ಸಾಹಿತ್ಯವನ್ನು ಸಂಪೂರ್ಣವಾಗಿ ಪುನರ್ ವಿಮರ್ಶಿಸಿ, ತಕ್ಕಂತ ರಾಗ, ತಿದ್ದುಪಡಿಗಳೊಂದಿಗೆ ಹೊಸದಾಗಿ ರಚಿಸುತ್ತಾರೆ.ಈ ಕಾರ್ಯದಲ್ಲಿ ಅನೇಕ ಪುಸ್ತಕಗಳನ್ನು ಓದಿ, ತಮಿಳಿನಲ್ಲಿ ದೊರಕಿದಂತ ಇಂತಹುದೇ ಸಾಹಿತ್ಯವನ್ನು ಸಹಾ ಅಭ್ಯಸಿಸುತ್ತಾರೆ. ಅನಕ್ಷರಸ್ಥರೇ ತು೦ಬಿದ ಗ್ರಾಮದಲ್ಲಿ ಈ ಹಾಡುಗಳನ್ನು, ವಚನಗಳನ್ನು ಹೇಳಿಕೊಡುವುದು ಕಷ್ಟವಾದರೂ ಆ ಕೊರತೆಯನ್ನು ತು೦ಬಿದ್ದು ಜನರ ಅಭಿಮಾನ, ಶ್ರದ್ಧೆ, ಶ್ರಮ, ದೇವರಲ್ಲಿನ ಭಕ್ತಿ ಹಾಗೂ ಗುರುಗಳೆಡೆಗಿನ ಗೌರವ. ಬಹುಮುಖ ಪ್ರತಿಭೆಯ ಇನ್ನಾಸಪ್ಪನವರು ವಿವಿಧ ಕ್ಷೇತ್ರಗಳಲ್ಲಿ ತಮ್ಮನ್ನು ತೊಡಗಿಸಿಕೊಂಡು, ಹಲವಾರು ರಂಗಗಳಲ್ಲಿ ಪರಿಣಿತಿ ಹೊಂದಿದ್ದರೂ ಹಾರೋಬೆಲೆ ಗ್ರಾಮದಲ್ಲಿ ನಡೆಯುವ ಯೇಸುಕ್ರಿಸ್ತರ ಪೂಜ್ಯ ಪಾಡುಗಳು ಹಾಗೂ ಪುನರುತ್ಠಾನದ ಮಹಿಮೆ ಅವರ ಜೀವನದ ಅತ್ಯಂತ ಮಹತ್ವದ ಕಾರ್ಯವೆಂದರೆ ತಪ್ಪಗಲಾರದು. ಅದು ಅವರ ಬಹಳ ಪ್ರೀತಿಯ ಕಾರ್ಯವೂ ಆಗಿತ್ತು. ವಿವಾಹ ಹಾಗೂ ಸಂಸಾರ[edit]

ಹೀಗೆ ಸಾಗುತಾ ಬಂದ ಜೀವನದ ಹಾದಿಯಲ್ಲಿ ಒಂದೊಂದೇ ಮಜಲುಗಳು ತೆರೆದುಕೊಳ್ಳುತ್ತವೆ.ಊರಿನ ಶಾಲೆಯಲ್ಲಿನ ಶಿಕ್ಷಕ ವೃತ್ತಿ ಅವರಿಗೆ ಮೇಷ್ಟ್ರು ಎಂಬ ನಾಮಾಂಕಿತವನ್ನು ನೀಡುತ್ತದೆ.ಅದೇ ಮುಂದೆ ದೊಡ್ಡಮೇಷ್ಟ್ರು ಎಂಬುದಾಗಿ ಅವರಿಗೆ ಅಂಟಿಕೊಳ್ಳುತ್ತದೆ.ಒಂದು ಕಾಲದಲ್ಲಿ ತಮ್ಮ ವಿಧ್ಯಾರ್ಥಿನಿಯಾಗಿದ್ದ ಅಂತೋಣಮ್ಮನವರ ಜೊತೆ ಇವರ ಮದುವೆಯ ಮಾತಾಗಿ 1930ರ ಜೂನ್ 12ರಂದು ಇನ್ನಾಸಪ್ಪನವರು ಅಂತೋಣಮ್ಮನವರೊಂದಿಗೆ ವೈವಾಹಿಕ ಜೀವನಕ್ಕೆ ಕಾಲಿಡುತ್ತಾರೆ. ಕುಟುಂಬ ಜೀವನ,ಸಂಸಾರದ ಹೊಣೆ ಹೊಸ ಜವಾಬ್ದಾರಿಗಳು ಕ್ರಿಯಾಶೀಲ ಮನಸ್ಸಿಗೆ, ಕಾರ್ಯ ಚಟುವಟಿಕೆಗಳಿಗೆ ತೊಡಕಾಗಬಹುದು. ಆದರೆ ಇನ್ನಾಸಪ್ಪನವರ ಬಾಳಿನಲ್ಲಿ ಅವರ ವಿವಾಹವು ಅವರಿಗೆ ಬಹಳ ದೊಡ್ಡ ವರವಾಗಿ ಪರಿಣಮಿಸಿತು. ಸಂಸಾರದ ಪೂರ್ಣ ಜವಾಬ್ದಾರಿಗಳೊಂದಿಗೆ ಪತಿಗೆ ಇತರ ಎಲ್ಲಾ ಕಾರ್ಯಗಳಲ್ಲೂ ಸಹಕರಿಸಿ ಸಹಾಯ ಮಾಡಿದವರು ಅಂತೋಣಮ್ಮನವರು. ಹಳ್ಳಿಯ ಹೆಣ್ಣು ಮಗಳಾದರೂ ಅಗಾಧವಾದ ಸಮಯಪ್ರಜ್ಞೆ ಶ್ರಮ ಜೀವನ, ಭಾವಣಿಕೆ, ಕರುಣ ಅಂತ:ಕರಣದಿಂದಾಗಿ ಶ್ರೀ.ಇನ್ನಾಸಪ್ಪನವರ ಮನಗೆದ್ದ ಇವರು, ಈ ಎಲ್ಲಾ ಕಾರಣಗಳಿಂದಾಗಿಯೇ ಕೊನೆಯವರೆಗೂ ಇನ್ನಾಸಪ್ಪನವರಿಗೆ ಅಚ್ಚುಮೆಚ್ಚಿನವರಾಗಿದ್ದರು ಎಂದರೆ ತಪ್ಪಾಗಲಾರದು. ಮುಂದೆ 1932ರಲ್ಲಿ ದ೦ಪತಿಗಳಿಗೆ ಚೊಚ್ಚಲ ಪುತ್ರನ ಜನನದ ಸ೦ಭ್ರಮ.ಮಗನಿಗೆ ಇನ್ನಾಸಪ್ಪನವರು ತಮ್ಮ ತ೦ದೆಯ ಹೆಸರನ್ನೇ ಇಡುತ್ತಾರೆ. ಅವರೇ ಇ೦ದು ಬೆ೦ಗಳೂರು ಮಹಾಧರ್ಮಕ್ಷೇತ್ರದ ಹಿರಿಯ ಗುರುಗಳಾದ ವ೦.ಸ್ವಾಮಿ ಐ. ಚಿನ್ನಪ್ಪ. ಒಟ್ಟು 11 ಜನ ಮಕ್ಕಳಲ್ಲಿ ಸ್ವಾಮಿ ಐ.ಚಿನ್ನಪ್ಪ, ಸಿಸ್ಟರ್ ಬೆನಿಗ್ನಾ ಹಾಗೂ ಸಿಸ್ಟರ್ ಸಿಸಿಲಿಯಾಯರನ್ನು ದೈವ ಸೇವೆಗೆ ಕಳುಹಿಸಿಕೊಡುತ್ತಾರೆ. ಸಿಸ್ಟರ್ ಬೆನಿಗ್ನಾ ಹಾರೋಬೆಲೆ ಗ್ರಾಮದಿ೦ದ ಕನ್ಯಾಸ್ರಿಯಾದವರಲ್ಲಿ ಮೊದಲಿಗರು. ತ೦ದೆಯ ಎಲ್ಲಾ ಗುಣಗಳನ್ನು ಮೈಗೂಡಿಸಿಕೊ೦ಡಿದ್ದ ಸಿಸ್ಟರ್ ಬೆನಿಗ್ನಾ ಉತ್ತಮವಾದ ಹೆಸರನ್ನು ಪಡೆದು ಬಹಳ ಸಣ್ಣ ವಯಸ್ಸಿನಲ್ಲೇ ತೀರಿಕೊ೦ಡರು. ಯಾವುದೇ ವಿಷಯವನ್ನು ಸಮಚಿತ್ತದಿ೦ದ ಸ್ವೀಕರಿಸುತ್ತಿದ್ದ ಇನ್ನಾಸಪ್ಪನವರಿಗೆ ಮಗಳ ಈ ಅಕಾಲಿಕ ಸಾವು ಅಗಾಧವಾದ ನೋವನ್ನು ತ೦ದಿತ್ತು ಹಾಗೂ ಅವರು ಇದರ ಬಗ್ಗೆ ಬಹಳವಾಗಿ ಯೋಚಿಸುತ್ತಿದ್ದರು ಎ೦ದು ಅವರ ಆಪ್ತರು ನೆನೆಯುತ್ತಾರೆ. ಅದೇ ರೀತಿಯಾಗಿ ಶ್ರೀ.ಸಿ.ಇನಾಸಪ್ಪನವರು ಬಹಳ ಇಷ್ಟಪಟ್ಟ ಕೆಲಸವೆಂದರೆ ತಮ್ಮ ಶಿಕ್ಷಕ ವೃತಿ.ತಮೆಲ್ಲಾ ಶಿಸ್ತು,ಅನುಭವ,ಪ್ರತಿಭೆ,ವಿಶ್ವಾಸ ಹಾಗೂ ಜ್ಞಾನವನ್ನು ತಮ್ಮ ವೃತಿಗೆ ಧಾರೆಯೆರೆದ ಇನ್ನಾಸಪ್ಪನವರು 1926 ರಿಂದ 1955ರ ವರೆಗೂ ಸಾವಿರಾರು ಮಕ್ಕಳ ಜ್ಞ್ನಾನಾರ್ಜನೆಯಲ್ಲಿ ನೆರವಾದರು.ಮೊದಲು ಒಂದು ಸಣ್ಣ ಆಸ್ಪತ್ರೆಯನ್ನು ಪ್ರಾರಂಭಿಸಿ,ನಂತರ ಶಾಲೆಯನ್ನು ವಿಸ್ತರಿಸಲು ಬಂದ ಸಂತ ಮರಿಯಮ್ಮನವರ ಸಭೆಯ ಭಗಿನಿಯರಿಗೆ ತಂಗಲು ಸರಿಯಾದ ಸ್ಥಳವಿರಲಿಲ್ಲ.ಇದನ್ನು ಅರಿತ ಇನ್ನಾಸಪ್ಪನವರು,ಊರಿನ ಪ್ರಮುಖ ಜಾಗದಲ್ಲಿ ತಾವೇ ಖರೀದಿಸಿದ್ದ ಜಾಗವನ್ನು ಊರಿನ ಕಾನ್ವೆಂಟಿಗಾಗಿ ನೀಡಿದರು. ಸಿಸ್ಟರ್‌ಗಳ ಸಹಾಯದಿಂದ ಆರೈಕೆ ಪಡೆದ ಸಾವಿರಾರು ರೋಗಿಗಳ ತೃಪ್ತಿ ಹಾಗೂ ವಿದ್ಯಾವಂತರಾದ ಅಸಂಖ್ಯಾತ ವಿದ್ಯಾರ್ಥಿಗಳ ಸಂತಸವನ್ನು ತಮ್ಮದೆಂಬಂತೆ ಅನುಭವಿಸಿದವರು ಇನ್ನಾಸಪ್ಪನವರು. ಅಂಚೆಯ ಅಣ್ಣ ಹಾಗೂ ಪುರೋಭಿವೃದ್ಧಿ[edit]

ಈಗಿರುವಾಗಲೇ ಗ್ರಾಮದಿಂದ ಬೆಂಗಳೂರು ಹಾಗೂ ಇತರ ಊರುಗಳಿಗೆ ಹೋಗಿ ನೆಲೆಸುವವರ ಸಂಖ್ಯೆಯೂ ಹೆಚ್ಚಾಯಿತು.ಇವರುಗಳ ಮಧ್ಯೆ ಸಂಪರ್ಕ ಹಾಗೂ ಹಣಕಾಸುಗಳ ವಿನಿಮಯಕ್ಕೆ ಸಂಪರ್ಕ ಸಾಧನವೊಂದು ಬೇಕಾಯಿತು. ಹಾಗಿರುವಾಗ 1955ರಲ್ಲಿ ಗ್ರಾಮಕ್ಕೆ ಪೋಸ್ಟ್ ಆಫೀಸ್ ಕಾಲಿಟ್ಟಿತು.ಅದರ ಪೋಸ್ಟ್ ಮಾಸ್ಟರ್ ಆಗಿ ಆಯ್ಕೆಗೊಂಡ ಇನ್ನಾಸಪ್ಪನವರ ಬದುಕಿನ ಮತ್ತೊಂದು ಮಜಲು ಅನಾವರಣಗೊಂಡಿತು.ಪೋಸ್ಟ್ ಆಫೀಸಿನ ಕೆಲಸದ ಜೊತೆಗೆ ಜನಗಳಿಗೆ ಪತ್ರಗಳನ್ನು ಓದುವ ಮತ್ತು ಅವರು ಹೇಳಿದಂತೆ ಪತ್ರಗಳನ್ನು ಬರೆಯುವ ಕಾರ್ಯವೂ ಅಂಟಿಕೊಂಡಿತು. ಇಡೀ ಗ್ರಾಮದ ನಕ್ಷೆಯ ವಿವರಗಳು ಇವರಿಗೆ ಅಂಗೈಯಷ್ಟೇ ಪರಿಚಯವಿದ್ದರಿಂದ ಗ್ರಾಮದ ಜನರು ಇವರ ಬಳಿಯೇ ಬಂದು ತಮ್ಮ ಆಸ್ತಿ, ಪಾಲುಗಳ ವಿವರಗಳನ್ನು ಪಡೆಯುತ್ತಿದ್ದರು.ಆ ವಿವರಗಳಲ್ಲಿ ಅವರಿಗಿದ್ದ ಜ್ಞಾನ, ಪರಿಣತಿ ಹಾಗೂ ನಿಷ್ಪಕ್ಷಪಾತ ಧೋರಣೆಯಿಂದಾಗಿ ಅವರ ಮಾತೇ ಅಂತಿಮ ತೀರ್ಪಂತಿರುತ್ತಿತ್ತು. ಅನೇಕ ಜನರು ಇವರ ಬಳಿ ಬಂದು ಸಲಹೆಗಳನ್ನು ಪಡೆಯುತ್ತಿದ್ದರು. ಈ ನಿಟ್ಟಿನಲ್ಲೇ ಸಣ್ಣಪುಟ್ಟ ಕೌಟುಂಬಿಕ ಕಲಹ, ನೆರೆಹೊರೆಯವರ ವ್ಯಾಜ್ಯ, ತಕರಾರುಗಳನ್ನು ಪರಿಹರಿಸಿಬಿಡುತ್ತಿದ್ದರು. ಅಧಿಕಾರಿಗಳೂ ಸಹ ಇವರ ಸಲಹೆ ಸೂಚನೆಗಳನ್ನು ಪಡೆದ ನಿದರ್ಶನಗಳೆಷ್ಟೋ. ಊರಿನ ಪಂಚಾಯಿತಿಯ ಕಾರ್ಯದರ್ಶಿಯಾಗಿ, ನಂತರ ಅಧ್ಯಕ್ಷರಾದ ಸಮಯದಲ್ಲಿ ಊರಿನ ಅನೇಕ ಅಭಿವೃಧ್ಧಿ ಕಾರ್ಯಗಳಿಗೆ ಚಾಲನೆ ದೊರೆಯಿತು.ಮಿತಭಾಷಿಯಾದರೂ ತಮ್ಮ ಗಾಂಭೀರ್ಯದ ವ್ಯಕ್ತಿತ್ವದಿಂದ ಊರಿನ ಕಾರ್ಯಗಳು ಅಧಿಕಾರಿ ವಲಯದಲ್ಲಿ ನಡೆಯುವಂತೆ ಮಾಡುತ್ತಿದ್ದರು.ಅ೦ತೆಯ ಕುರಿ ಸ೦ಘ,ಸಹಕಾರ ಸ೦ಘ,ಮರಿಯಮ್ಮನವರ ಸೇನೆ, ಭಜನೆ ಸ೦ಘಗಳನ್ನು ಮುನ್ನಡೆಸುತ್ತಾ ಬ೦ದರು. ಈ ಯಶಸ್ಸಿನ ಹಾದಿಯಲ್ಲಿ ಕಲ್ಲುಮುಳ್ಳುಗಳು ಇಲ್ಲದಿರಲಿಲ್ಲ.ಎಷ್ಟೋ ಬಾರಿ ಕೆಲವರ ಮತ್ಸರದಿಂದಾಗಿ ಅಡೆತಡೆಗಳನ್ನು ಅನುಭವಿಸಿಬೇಕಾಗಿ ಬಂದರೂ ತಮ್ಮ ಘನತೆ, ಸಹನೆ, ನಗುಮುಖ ಹಾಗೂ ಗ್ರಾಮದ ಜನರ ಸಹಕಾರದಿಂದಾಗಿ ಅವೆಲ್ಲವನ್ನೂ ಸಾತ್ವಿಕವಾಗಿ ಮೆಟ್ಟಿ ಅಜಾತಶತ್ರುವಾಗಿ ನಿಂತವರು ಶ್ರೀ.ಸಿ.ಇನ್ನಾಸಪ್ಪನವರು. ಸರ್ವಜನರೂ ತಮಗೆ ನೀಡುತ್ತಿದ್ದ ಗೌರವ, ಪ್ರೀತ್ಯಾದರಗಳನ್ನು ಬಹಳ ಗಂಭೀರವಾಗಿ ತೆಗೆದುಕೊಂಡಿದ್ದ ಇನ್ನಾಸಪ್ಪನವರು,ತಮಗೆ ಸಿಗುತ್ತಿದ್ದ ಈ ಎಲ್ಲಾ ಗೌರವಕ್ಕೆ ಚ್ಯುತಿ ಬರದಂತೆ ತಮ್ಮ ವ್ಯಕ್ತಿತ್ವವನ್ನು ರೂಪಿಸಿಕೊಂಡು, ಅದನ್ನೇ ಬೆಳಸಿ ಉಳಿಸಿಕೊಂಡ ಮಹಾ ಚೇತನ. ಇಂದು ಬೆಟ್ಟದ ಅಲಸೂರು ಬೆಂಗಳೂರು ಧರ್ಮಕ್ಷೇತ್ರದ ಬಹುದೊಡ್ಡ ಪುಣ್ಯ ಕ್ಷೇತ್ರವಾಗಿ ಬೆಳೆದಿದೆ.ಇದು ಕೆಲವೇ ವರ್ಷಗಳ ಹಿಂದಿನವರೆಗೂ ಹಾರೋಬೆಲೆ ಧರ್ಮಕೇಂದ್ರ ಉಪಕೇಂದ್ರವಾಗಿದ್ದು ಎಲ್ಲರಿಗೂ ತಿಳಿದ ವಿಷಯ. ಹಾರೋಬೆಲೆ ಗ್ರಾಮದ ಧರ್ಮಕೇಂದ್ರದ ಗುರುಗಳು ಹಾಗೂ ಜನರ ಸೇವೆ, ಅಪಾರವಾದ ಶ್ರಮ,ಕನಸು ಈ ಪುಣ್ಯ ಕ್ಷೇತ್ರದ ಇತಿಹಾಸದಲ್ಲಿ ಕಳೆದುಹೋಗಿದೆ.ಇದರಲ್ಲಿ ಇನ್ನಾಸಪ್ಪನವರ ಶ್ರಮವೂ ಅಪಾರ.ಅಲ್ಲಿನ ಆಗುಹೋಗುಗಳನ್ನು ಹಾಗೂ ಹಬ್ಬದ ಸಕಲ ವ್ಯವಸ್ಥೆಗಳನ್ನು ಧರ್ಮಕೇಂದ್ರದ ಗುರುಗಳೊಂದಿಗೆ ಮಾಡಿ, ಇಡೀ ವ್ಯವಸ್ಥೆಗಳ ಜವಾಬ್ದಾರಿಯನ್ನು ಅನೇಕ ದಶಕಗಳ ಕಾಲ ಮಾಡಿಕೊಂಡು ಬಂದವರು ಅವರು. ಪೋಪರ ಭೇಟಿ[edit]

ಇದೆಲ್ಲದರ ಪ್ರತಿಫಲವಾಗಿ ೧೯೭೫ರಲ್ಲಿ ಕರ್ನಾಟಕದ ಪ್ರತಿನಿಧಿಯಾಗಿ ರೋಮ್ ದೇಶಕ್ಕೆ ಹೋಗಿ ಜಗದ್ಗುರು ಆರನೇಯ ಚಿನ್ನಪ್ಪ (Paul VI)ರವರನ್ನು ಸಂದರ್ಶಿಸುವ ಭಾಗ್ಯ ಲಭಿಸಿತು.ಹಾರೋಬೆಲೆ ಗ್ರಾಮ ಮಾತ್ರವಲ್ಲದೇ ಇಡೀ ಕನ್ನಡ ಕ್ರೈಸ್ತ ಸಮುದಾಯವೇ ಇವರನ್ನು ತುಂಬು ಹೃದಯದಿಂದ ಅಭಿನಂದಿಸಿದ್ದಲ್ಲದೇ ಅಭೂತಪೂರ್ವಕವಾಗಿ ಬೀಳ್ಕೊಟ್ಟಿದ್ದು ಇನ್ನಾಸಪ್ಪನವರ ಬದುಕಿನ ಸ್ವರ್ಣಗಳಿಗೆಗಳಲ್ಲೊಂದು.ರೋಮ್ ದೇಶವೆಂದೊಡನೆ ಪಾಶ್ಚಿಮಾತ್ಯ ಉಡುಪುಗಳೊಂದಿಗೆ ಹೋದ ಇತರರ ಮಧ್ಯೆ ತಮ್ಮ ಸ್ಠಳೀಯ ಉಡುಪಾದ ಪಂಚೆಯನ್ನುಟ್ಟು ಹೋದ ಸಿ.ಇನ್ನಾಸಪ್ಪನವರಿಗೆ ಆ ಉಡುಪೇ ದೊಡ್ಡ ವರವಾಗಿ ಪರಿಣಮಿಸಿತು.ಸ್ಥಳೀಯ ಸಂಸ್ಕೃತಿ,ಆಚಾರದ ಪ್ರತೀಕದ೦ತ್ತಿದ್ದ ಇನ್ನಾಸಪ್ಪನವರು ಪೋಪ್ ಒಳಗೊಂಡಂತೆ ಎಲ್ಲರ ಮನಸೆಳೆದದ್ದು ಈಗ ಇತಿಹಾಸ. ಬಹುಮುಖ ಪ್ರತಿಭೆಯನ್ನು ಹೊ೦ದಿದ ಇನ್ನಾಸಪ್ಪನವರು ತಾವೇ ರಚಿಸಿದ ಹರಿಕಥೆಗಳನ್ನು ಹಾಡುವದರಲ್ಲಿ ಸಹ ಬಹಳ ನಿಷ್ಣಾತರಾಗಿದ್ದರು.ಸ್ವತ: ಹಾರ್ಮೋನಿಯಂ ನುಡಿಸುತ್ತಾ ಲ್ಯಾಟಿನ್ ರಾಗಗಳನ್ನು ಹಾಡುತ್ತಿದ್ದರು. ಪ್ರಾರಂಭದ ದಿನಗಳಲ್ಲಿ ಅವರು ದೇವಮಾತೆಯ ಹಾಡುಗಳನ್ನೇ ಹೆಚ್ಚಾಗಿ ರಚಿಸಿದ್ದರು. ಅವರ ಅಸಂಖ್ಯ ಗೀತೆಗಳಲ್ಲಿ ದೇವಮಾತೆಯ ಹಾಡುಗಳಿಗೆ ಬಹಳ ಪ್ರಾಮುಖ್ಯತೆ.ಮೂಲಗಳ ಪ್ರಕಾರ ದಯಾವುಳ್ಳ ತಾಯೇ ಎ೦ಬ ಗೀತೆ ಬಹುಶ: ಅವರ ಪ್ರಪ್ರಥಮ ಗೀತೆ.ಮಹಿಮೆಯ ಪಾತ್ರಧಾರಿಗಳಿಗೆ ಬೇಹಾದ ಸಾಮಾಗ್ರಿಗಳ ವಿನ್ಯಾಸವನ್ನು ಸಹ ಮಾಡುತ್ತಿದ್ದರು ಎಂದರೆ ಆಶ್ಚರ್ಯವಾಗುತ್ತದೆ.ವಿದೇಶದಲ್ಲಿ ನಡೆಯುವ ಮಹಿಮೆಯ ಚಿತ್ರಗಳನ್ನು ನೋಡಿ,ಅದೇ ಮಾದರಿಯಲ್ಲಿನ ಅನೇಕ ಸಾಮಗ್ರಿಗಳನ್ನು, ವಸ್ತ್ರಗಳ ವಿನ್ಯಾಸವನ್ನು ಅವರು ಮಾಡಿಸಿದ್ದರು.ಇದರಲ್ಲಿ ಶ್ರೀಮತಿ.ಆಂತೋಣಮ್ಮನವರ ಪಾತ್ರವು ಹಿರಿದು.ಅದಕ್ಕೆ ಬೇಕಾದ ಸೂಜಿ,ದಾರ,ಗೋಂದು, ಪೇಸ್ಟುಗಳನ್ನು ಪೂರೈಸುತ್ತಿದ್ದವರು ಅವರೇ. ಶಿಸ್ತಿನ ಸಿಪಾಯಿ[edit]

ಇವೆಲ್ಲದರ ಜೊತೆಯಲ್ಲೇ ಶ್ರೀ. ಸಿ. ಇನಾಸಪ್ಪನವರದು ಬಹಳ ವೈಶಿಷ್ಟ್ಯಪೂರ್ಣ ವ್ಯಕ್ತಿತ್ವ.ಶಿಸ್ತಿನ ಜೀವನ ಶೈಲಿಗೆ ಹೆಸರಾದವರು.ಅವರ ದೈನಂದಿನ ಕೆಲಸ ಕಾರ್ಯಗಳಲ್ಲಿ ಶಿಸ್ತು ಬಹಳ ಪ್ರಮುಖವಾದ ಪಾತ್ರವನ್ನು ವಹಿಸುತ್ತಿದ್ದರಿಂದ ಹಲವಾರು ಕಾರ್ಯಗಳಿಗೆ,ಚಟುವಟಿಕೆಗಳಿಗೆ ಸಮಯವು ನಿಗದಿಯಾಗಿತ್ತು.ಪ್ರಾರ್ಥನೆ,ಪೂಜೆಯನ್ನು ಎಂದೂ ತಪ್ಪಿಸಲಿಲ್ಲವಾದರೂ ಜೊತೆ ಜೊತೆಗೆ ಬರವಣಿಗೆ,ಸಂಗೀತ ರಚನೆ,ಓದು,ಪೋಸ್ಟ್ ಮಾಸ್ಟರ್ ಉದ್ಯೋಗ,ಊರಿನ ಕೆಲಸ,ಕುಟುಂಬದ ಜವಾಬ್ದಾರಿ ಎಲ್ಲಕ್ಕೂ ಅದರದೇ ಆದ ಸಮಯವಿರುತ್ತಿದ್ದುದ್ದು ನಿಜಕ್ಕೂ ಅಚ್ಚರಿಯ ಸಂಗತಿ.ಇತ್ತೀಚಿಗೆ ರೂಢಿಯಲ್ಲಿರುವ Time Managementಗೆ ಬಹು ದೊಡ್ಡ ಮಾದರಿ ಸಿ. ಇನಾಸಪ್ಪ.ಅಂತೆಯೇ ತಮ್ಮ ಬಟ್ಟೆಗಳನ್ನು ತಾವೇ ಒಗೆದುಕೊಳ್ಳುತ್ತಿದದ್ದು ಅವರ ವೈಶಿಷ್ಟ್ಯ.ಅವರ ವಸ್ತ್ರಗಳಲ್ಲಿ ಹೆಚ್ಚಿನವು ಬಿಳಿಯ ಬಣ್ಣದ್ದೇ.ಅವುಗಳನ್ನು ತಾವೇ ಒಗೆದು,ನೀಲಿ ಹಚ್ಚಿ ಊರಿನ ತೊರೆಯ ಬಂಡೆಯ ಮೇಲೆ ಒಣಗಿಸುತ್ತಿದ್ದ ದೃಶ್ಯವನ್ನು ಅನೇಕರು ನೆನಪಿಸಿಕೊಳ್ಳುತ್ತಾರೆ.ಹಾಗೆಯೇ ಶುಭ ಸ೦ದೇಶದಲ್ಲಿ ಮೀನು ಹಾಗೂ ಬೆಸ್ತರ ಪಾತ್ರ ಮಹತ್ವವಾದದ್ದು.ಶುಭ ಸ೦ದೇಶದ ಕಟ್ಟಾ ಓದುಗ ಹಾಗೂ ಅನುನಾಯಿಯಾಗಿದ್ದ ಇನಾಸಪ್ಪನವರು ಗಾಳ ಹಾಕಿ ಮೀನುಗಳನ್ನು ಹಿಡಿಯುವುದರಲ್ಲಿ ನಿಷ್ಣಾತರು ಎನ್ನುವುದು ಕಾಕತಾಳೀಯ.ಹಾಗೆಯೇ ಬಲೆಗಳನ್ನು ಸ್ವತ: ತಾವೇ ತಯಾರಿಸುತ್ತಿದ್ದರ೦ತೆ.ತಮ್ಮ ಬಿಡುವಿಲ್ಲದ ದಿನಚರಿಯಲ್ಲಿ ಈ ಹವ್ಯಾಸವೂ ಸೇರಿಕೊಂಡಿತ್ತು. ಹಾಗೆ ಹಿಡಿದ ಮೀನನ್ನು ತಮ್ಮ ಶ್ರೀಮತಿಯವರ ಕೈಯಲ್ಲೇ ಅಡುಗೆ ಮಾಡಿಸಿ ತಿನ್ನುವುದು ಅವರಿಗೆ ಅಚ್ಚುಮೆಚ್ಚು. ಇನ್ನಾಸಪ್ಪನವರ ಮತ್ತೊಂದು ಬಹು ದೊಡ್ಡ ಸಾಮರ್ಥ್ಯವೆಂದರೆ ಪ್ರತಿಭೆಗಳನ್ನು ಗುರುತಿಸುವುದು.ಒಬ್ಬ ವ್ಯಕ್ತಿಯ ನಿಲುವು,ನಡೆ,ನುಡಿ,ಸಾಮರ್ಥ್ಯವನ್ನು ಬಹುಬೇಗ ಗುರುತಿಸಿ ಅದಕ್ಕೆ ತಕ್ಕಂತ ಪಾತ್ರವನ್ನು ನೀಡುತ್ತಿದ್ದರಿಂದ ಮಹಿಮೆ ಹಾಗೂ ನಾಟಕದ ಕೆಲವು ಪಾತ್ರಧಾರಿಗಳು ಆ ಪಾತ್ರಕ್ಕಾಗಿಯೇ ಹುಟ್ಟಿರುವರೇನೋ ಎಂಬಂತೆಭಾಸವಾಗುತ್ತಿತ್ತು.ಅಂತೆಯೇ ಪಾತ್ರವಿಲ್ಲದವರಿಗೂ ಅವರ ಪ್ರತಿಭಯೆ ಅನುಸಾರ ಕೆಲಸಗಳನ್ನು ಹ೦ಚಿತ್ತಿದ್ದರು. ತಮಗಿಂತ ಉತ್ತಮವಾಗಿ ಹಾರ್ಮೋನಿಯಂ ನುಡಿಸುತ್ತಿದ್ದವರಿಗೆ ಅದರ ಜವಾಬ್ದಾರಿಯನ್ನು ಬಿಟ್ಟು ತೆರೆಯಮರೆಗೆ ಹೋದಂತ ದೊಡ್ಡ ಗುಣ ಅವರಲ್ಲಿತ್ತು.ಹಾಗೆಯೇ ಯಾವುದೇ ಸಲಹೆ,ಎಂತಹ ಕಿರಿಯರಿಂದ ಬಂದರೂ ಸ್ವೀಕರುಸುತ್ತಿದ್ದ ಅವರಲ್ಲಿ ಈ ರೀತಿಯ ನಾಯಕತ್ವದ ಅನೇಕ ಗುಣಗಳಿದ್ದವು. ಹಾಸ್ಯ ಪ್ರಜ್ಞೆ - ಸಂಕಲ್ಪ ಸಿದ್ಧಿ[edit]

ಮಹಿಮೆ ನಾಟಕದಲ್ಲಿ ಪಾತ್ರಧಾರಿಗಳು ಹಾಸ್ಯಾಸ್ಪದವಾಗಿ ಇಲ್ಲವೇ ಗಾಂಭೀರ್ಯವಿಲ್ಲದೆ ನಡೆದುಕೊಂಡರೆ ಕೋಪಗೊಳ್ಳುತ್ತಿದ್ದ ಇನ್ನಾಸಪ್ಪನವರಲ್ಲಿ ಅಪಾರವಾದ ಹಾಸ್ಯಪ್ರಜ್ಞೆ ಇತ್ತು ಎಂಬುದಕ್ಕೆ ಇತರ ಸಂತರ ನಾಟಕಗಳಲ್ಲಿ ಬರುವ ಹಾಸ್ಯದೃಶ್ಯಗಳೇ ಸಾಕ್ಷಿ.ಆ ನಾಟಕಗಳಲ್ಲಿ ಹಾಸ್ಯಕ್ಕೆ ಎಷ್ಟು ಪ್ರಮುಖವಾದ ಪಾತ್ರವಿದೆ ಎ೦ದರೆ ಅವರ ಎಷ್ಟೋ ನಾಟಕಗಳಲ್ಲಿ ಪ್ರಮುಖ ಪಾತ್ರಧಾರಿಗಳಿಗಿ೦ತ ಹಾಸ್ಯ ಪಾತ್ರಧಾರಿಗಳೇ ಹೆಚ್ಚು ಪ್ರಸಿದ್ಧರು. ಅವರ ವಯಕ್ತಿಕ ಬದುಕಿನ ವಿವರಗಳೂ ಸಹ ಅಷ್ಟೇ ಆಸಕ್ತಿಕರ ಹಾಗೂ ಆದರ್ಶನೀಯ. ತಮ್ಮ ಸಂಕಲ್ಪ ಶಕ್ತಿಗೆ ಹೆಸರಾಗಿದ್ದ ಇನ್ನಾಸಪ್ಪನವರಿಗೆ ತಮ್ಮ ಆರೋಗ್ಯದ ಬಗ್ಗೆ ಬಹಳ ಕಾಳಜಿ.ಧೂಮ ಪಾನದ ಅಭ್ಯಾಸವಿದ್ದ ಅವರಿಗೆ ಒಮ್ಮೆ ಕೆಮ್ಮು ಬಹಳವಾಗಿ ಕಾಡಿ, ವೈದ್ಯರ ಬಳಿ ಹೋದಾಗ ವೈದ್ಯರು ಧೂಮ ಪಾನವನ್ನು ಬಿಡಬೇಕು ಎಂದು ಸಲಹೆ ನೀಡಿದಾಗ ದಶಕಗಳಿಂದ ಇದ್ದ ಅಭ್ಯಾಸವನ್ನು ಅದೇ ಕ್ಷಣದಲ್ಲಿ ತ್ಯಜಿಸಿದ ಘಟನೆ ಅವರ ಸಂಕಲ್ಪಶಕ್ತಿ ಹಾಗೂ ಅವರ ಆರೋಗ್ಯದ ಬಗೆಗಿನ ಕಾಳಜಿಗೆ ಉದಾಹರಣೆಯಾಗಿದೆ. ತಮ್ಮ ಕುಟುಂಬ ಹಾಗು ಬಂಧು ಬಳಗದವರಿಗೆ ಬರೆಯುತ್ತಿದ್ದ ಪತ್ರಗಳೇ ಒಂದು ಸಣ್ಣ ಅಧ್ಯಯನಕ್ಕೆ ಸಾಮಗ್ರಿಯಾಗಬಹುದು. ಶುಭಹಾರೈಕೆ,ಸಾಂತ್ವನ,ಕುಶಲ ಸಮಾಚಾರದ ಪತ್ರಗಳಲ್ಲಿ ಎದ್ದು ಕಾಣುವುದು ಅವರ ಜೀವನ ಪ್ರೀತಿ,ಸಕಾರಾತ್ಮಕ ಧೋರಣೆ ಹಾಗೂ ದೇವರಲ್ಲಿನ ಅಗಾಧವಾದ ಪ್ರೀತಿ ಮತ್ತು ವಿಶ್ವಾಸ. ಕೆರೆಯ ನೀರನು ಕೆರೆಗೆ ಚೆಲ್ಲು ಎಂಬಂತೆ ದೇವರು ದಯಪಾಲಿಸಿದ ಅಷ್ಟೂ ಪ್ರತಿಭೆಯನ್ನು ದೇವರ ಹಾಗೂ ಸಾರ್ವಜನಿಕ ಕಾರ್ಯಗಳಿಗಾಗಿ ಉಪಯೋಗಿಸಿದ ಇನ್ನಾಸಪ್ಪನವರು ಅದಕ್ಕೆ ತಕ್ಕ ಸಂಭಾವನೆಯನ್ನು ಜನರ ಪ್ರೀತಿ,ಗೌರವ,ಆದರಗಳಲ್ಲೇ ಪಡೆದರು ಎಂದರೆ ತಪ್ಪಾಗಲಾರದು.ಮಗಳ ಸಾವು,ಶ್ರೀಮತಿಯ ಆರೋಗ್ಯ, ಕೌಟುಂಬಿಕ ಜವಾಬ್ದಾರಿಗಳು,ಇವೆಲ್ಲಾ ಇವರ ಮೇಲೆ ತಮ್ಮದೇ ಆದ ಪರಿಣಾಮವನ್ನು ಬೀರಿದರೂ ದೇವರ ಚಿತ್ತವೇ ಅಂತಿಮವೆಂಬುದು ಅವರ ದೃಢ ವಿಶ್ವಾಸವಾಗಿತ್ತು. ಜಪಸರ ಹಾಗೂ ದೇವಮಾತೆಯಲ್ಲಿ ಅಗಾಧವಾದ ಭಕ್ತಿಯಿದ್ದ ಅವರಿಗೆ ದಿನಕ್ಕೆ 15 ಬಾರಿ ಜಪಸರ ಪಾರ್ಥನೆ ಹೇಳುವ ಅಭ್ಯಾಸ. ಒಂದೊಂದು ಜಪಸರವೂ ಒಂದೊಂದು ಉದ್ದೇಶಕ್ಕಾಗಿ ಇರುತ್ತಿದ್ದುದ್ದು ವಿಶೇಷ.ಅದರಲ್ಲಿ ಊರಿನ ಏಳಿಗೆಗೆ ಒಂದು ಮೀಸಲಾಗಿದ್ದನ್ನು ಮರೆಯಲಾಗದು. ಮರಣ[edit]

ಶರಣರ ಜೀವನವನ್ನು ಮರಣದಲ್ಲಿ ಕಾಣು ಎಂಬಂತೆ ತಮ್ಮ ಪ್ರಾರ್ಥನೆಗಳಲ್ಲಿ ಒಳ್ಳೆಯ ಮರಣಕ್ಕಾಗಿ ಸದಾ ಬೇಡುತ್ತಿದ್ದರು.ಒಳ್ಳೆಯ ಮರಣದ ಪಾಲಕರಾದ ಸಂತ ಜೋಸೆಫರಿಗೆ ಪ್ರಾರ್ಥನೆ ಸಲ್ಲಿಸುತ್ತಿದ್ದ ಇನ್ನಾಸಪ್ಪನವರು ಕೊನೆಗೆ ಸಂತ ಜೋಸೆಫರ ದಿನವಾದ ಬುಧವಾರದಂದೇ ಇಹಲೋಕವನ್ನು ತ್ಯಜಿಸಿದ್ದು ಕಾಕತಾಳೀಯವಲ್ಲ,ಆಕಸ್ಮಿಕವಂತೂ ಅಲ್ಲವೇ ಅಲ್ಲ.ಅದು ಅವರ ಅವಿರತ ಪ್ರಾರ್ಥನೆಯ ಫಲ. ಅದು 1997ರ ನವೆಂಬರ್ 26. ತಮ್ಮ ಪತ್ನಿಗಾಗಿ ಸಹ ಸದಾ ಪ್ರಾರ್ಥಿಸುತ್ತಿದ್ದರ ಫಲವೋ ಎಂಬಂತೆ ಅವರೂ ಸಹ ಬುಧವಾರವೇ ಅದರಲ್ಲೂ ವಿಭೂತಿ ಬುಧವಾರದಂದೇ ನಿಧನಹೊಂದಿದರು.


References

edit
edit